ಪದ್ಮಾಕ್ಷ	
	ಚಂದ್ರಹಾಸ ಹಾಗೂ ಕುಂತಲರಾಜನ ಮಗಳಾದ ಚಂಪಕ ಮಾಲಿನಿಯರ ಮಗ, ಸಾಹಸಿ. ಈತನೂ ಈತನ ಭಿನ್ನೋದರ ಭ್ರಾತೃವಾದ ಮಕರಧ್ವಜನೂ ಕುಂತಲಪುರಕ್ಕೆ ಬಂದ ಪಾಂಡವರ ಯಜ್ಞಾಶ್ವವನ್ನು ಕಂಡು ವಿಸ್ಮಿತರಾಗಿ ಕುದುರೆಗಳನ್ನು ತೆಗೆದುಕೊಂಡು ಹೋಗಿ ಚಂದ್ರಹಾಸನಿಗೆ ಸುದ್ದಿಯನ್ನು ತಿಳಿಸಿದರು.

	ಇದೇ ಹೆಸರಿನ ಇನ್ನೊಬ್ಬ ರಾಜ. ಲಕ್ಷ್ಮಿ ತನ್ನ ಮಗಳಾಗಬೇಕೆಂಬ ಅಪೇಕ್ಷೆಯಿಂದ ತಪಸ್ಸು ಮಾಡುತ್ತಾನೆ. ಲಕ್ಷ್ಮಿ ಪ್ರತ್ಯಕ್ಷಳಾಗಿ ನಾರಾಯಣನ ಒಪ್ಪಿಗೆಯನ್ನು ಪಡೆ ಎಂದು ಹೇಳಿ ಅದೃಶ್ಯಳಾಗುತ್ತಾಳೆ. ಮತ್ತೆ ತಪಸ್ಸು ಮಾಡಲಾಗಿ ನಾರಾಯಣ ಪ್ರತ್ಯಕ್ಷವಾಗಿ ಬೇಡಿಕೆ ಈಡೇರಲು ಒಂದು ಮಾದಳದ ಫಲವನ್ನು ಕೊಡುತ್ತಾನೆ. ಈ ಹಣ್ಣಿನ ಒಳಗಿನಿಂದ ಹೆಣ್ಣು ಕೂಸನ್ನು ಪಡೆದ ಪದ್ಮಾಕ್ಷ ಅದನ್ನು ಪ್ರೀತಿಯಿಂದ ಸಾಕುತ್ತಾನೆ. ಆಕೆಯನ್ನು ನೀಲಮೇಘಶ್ಯಾಮನಾದ ರಾಜನಿಗೆ ಕೊಡಲಾಗುವುದೆಂದು ಆಕೆಯ ವಿವಾಹ ಕಾಲದಲ್ಲಿ ಸಾರಲಾಗುತ್ತದೆ. ಆದರೆ ಆ ಬಣ್ಣ ಯಾವ ರಾಜನಿಗೂ ಇರಲಿಲ್ಲವಾಗಿ ಅಲ್ಲಿ ಸೇರಿದ್ದ ರಾಜರೆಲ್ಲರೂ ಪದ್ಮಾಕ್ಷನೊಡನೆ ಯುದ್ಧಕ್ಕೆ ಬರುತ್ತಾರೆ. ಪದ್ಮಾಕ್ಷನ ಸೈನ್ಯ ನಗರ ಎಲ್ಲ ನಾಶವಾಗುತ್ತವೆ. ಮಗಳು ಯಜ್ಞಕುಂಡದಲ್ಲಿ ಅದೃಶ್ಯಳಾಗುತ್ತಾಳೆ. ಅನಂತರ ಪದ್ಮಾಕ್ಷ ಸಂಪತ್ತಿಗೆ ಒಡೆಯನಾದ ಕುಬೇರನಾಗುತ್ತಾನೆ.									(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ